You are hereಕನ್ನಡ ಕಲಿ
ಕನ್ನಡ ಕಲಿ
“ಕನ್ನಡ ಕಲಿ” ೨೦೦೯ರ ವಸಂತಮಾಸದಲ್ಲಿ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿತು. “ಆಟದೊಡನೆ ಪಾಠ” ಎನ್ನುವ ಧ್ಯೇಯವನ್ನಿಟ್ಟುಕೊಂಡಿರುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ನಗುನಗುತ್ತಾ - ತಂದೆತಾಯಿಯರ ಒತ್ತಾಯವಿಲ್ಲದೆ ಪ್ರತಿವಾರ ತರಗತಿಗೆ ಬರುತ್ತಿರುವುದು ನಮಗೆ ಸಂತೋಷದ ಮತ್ತು ಹೆಮ್ಮೆಯ ಸಂಗತಿ! ಪ್ರತಿ ವರ್ಷ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಈ ಕಾರ್ಯಕ್ರಮವು ನೂರಾರು ಮಕ್ಕಳಿಗೆ ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಕಲಿಸಿದೆ. ‘ಗುಂಜನ’ ಬಾಲವೃಂದದ ಮೂಲಕ ಮಕ್ಕಳು ಹಲವಾರು ಕನ್ನಡ ಗೀತೆಗಳನ್ನು ಹಾಡಲು ಕಲಿತಿದ್ದಾರೆ ಮತ್ತು ಅನೇಕ ಕನ್ನಡ ಕೂಟದ ಕಾರ್ಯಕ್ರಮಗಳಲ್ಲಿ ವೇದಿಕೆಯ ಮೇಲೆ ಒಟ್ಟಿಗೆ ನಿಂತು, ಹಾಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
“ಕನ್ನಡ ಕಲಿ”ಯ ಯಶಸ್ಸಿಗೆ ಮುಖ್ಯವಾಗಿ ಮಕ್ಕಳ ಉತ್ಸಾಹ, ತಂದೆತಾಯಿಯರ ಪ್ರೋತ್ಸಾಹ ಮತ್ತು ಸ್ವಯಂಸೇವಕ ಉಪಾಧ್ಯಾಯ ವೃಂದದ ಶ್ರದ್ಧೆ, ಆಸಕ್ತಿ, ಮತ್ತು ಅವಿರತ ದುಡಿಮೆಯೇ ಕಾರಣ. ಉಪಾಧ್ಯಾಯರ ಅಪಾರ ಕನ್ನಡ ಪ್ರೀತಿ ನಿಜವಾಗಿಯೂ ಮೆಚ್ಚುವಂತಹದ್ದು. ಪ್ರತಿ ಶನಿವಾರ ತಮ್ಮ ಅಮೂಲ್ಯವಾದ ಸಮಯವನ್ನು ”ಕನ್ನಡ ಕಲಿ”ಗೆ ಮೀಸಲಾಗಿಟ್ಟು, ಪ್ರತಿಯಾಗಿ ಏನನ್ನೂ ಬಯಸದೆ, ಮಕ್ಕಳಿಗೆ ಕನ್ನಡ ಕಲಿಸುವುದರ ಮೂಲಕ ವಿದ್ಯಾದಾನ ಮಾಡುತ್ತಿದ್ದಾರೆ. ಇವರ ಕನ್ನಡ ಪ್ರೀತಿ ಹೀಗೇ
ಮುಂದುವರೆಯಲಿ!
ಇದೇ ಸೆಪ್ಟಂಬರ್ ೨೦೦೯ರಲ್ಲಿ ಪ್ರಾರಂಭವಾಗುವ ತರಗತಿಗಳಲ್ಲಿ ಒಂದು ಪ್ರಮುಖವಾದ ಬದಲಾವಣೆ ಇದೆ. ಪ್ರತಿ ಸಲದಂತೆ ವರ್ಷಕ್ಕೆ ಎರಡು ಸೆಶನ್ ಬದಲು ಸೆಪ್ಟಂಬರ್ ತಿಂಗಳಿಂದ ಮೇ ತಿಂಗಳವರೆಗೆ ಒಂದೇ ಸೆಶನ್ ಮಾಡಲಾಗುವುದು. ಇದರಿಂದ ಎರಡು ಬಾರಿ ದಾಖಲು ಮಾಡುವ ಬದಲು ವರ್ಷಕ್ಕೆ ಒಂದೇ ಬಾರಿ, ಸೆಪ್ಟೆಂಬರ್ ತಿಂಗಳಿಗೆ ಮುಂಚೆ, ಮಕ್ಕಳನ್ನು ಕಾರ್ಯಕ್ರಮಕ್ಕೆ ನೋಂದಾಯಿಸಬಹುದು.
ಮಕ್ಕಳಿಗೆ ಅಕ್ಷರಾಭ್ಯಾಸ, ಕಾಗುಣಿತ ಇತ್ಯಾದಿಗಳನ್ನು ಹೊಸ ರೀತಿಯಲ್ಲಿ ಕಲಿಸಲು ನಾವು ಸದಾ ಶ್ರಮಿಸುತ್ತೇವೆ. ಹೊಸದಾದ ಮತ್ತು ಆಕರ್‍ಷಕವಾದ ಪುಸ್ತಕಗಳನ್ನು, ಹಾಡು-ಹಸೆಗಳನ್ನು ಸಿದ್ಧಪಡಿಸುತ್ತೇವೆ ಮತ್ತು ಹುಡುಕಿ ತರುತ್ತೇವೆ. ಅದರಂತೆ ಈ ಬಾರಿಯೂ ಹೊಸ ಪುಸ್ತಕಗಳು ಸಿದ್ಧವಾಗಿದೆ. ಕಲಿಸಲು ನಮ್ಮ ಉಪಾಧ್ಯಾಯ ವೃಂದ ಸಿದ್ಧವಾಗಿದೆ!
ಈ ವರ್ಷ ಉಪಾಧ್ಯಾಯರಾಗಿ ನಮಗೆ ಸಹಾಯ ಮಾಡಿದವರು: ರಂಜಿನಿ ಭಗವಾನ್, ಜ್ಯೋತಿ ಗಿರಿಧರ್, ವಾಣಿ ದ್ವಾರಕಾನಾಥ್, ಸಂಧ್ಯಾ ಗಾಯತ್ರಿ, ಮೀನಾಕ್ಷಿ ಶೇಖರ್, ಜ್ಯೋತಿ ಶೇಖರ್, ವಿಜಯ್ ಕಡಬ. “ಗುಂಜನ” ಬಾಲವೃಂದಕ್ಕೆ ಸಂಗೀತ ನಿರ್ದೇಶಿಸಿದವರು: ರವಿ ರವೀಂದ್ರನಾಥ್, ಗಿರಿಧರ್ ಮಳವಳ್ಳಿ. ಇವರ ಬೆಂಬಲ ಮತ್ತು ಸಹಕಾರಕ್ಕೆ ನಮ್ಮ ನಮನಗಳು.
ಇದೇ ಸೆಪ್ಟೆಂಬರ್ ೧೯ರಂದು ನಮ್ಮ ಹೊಸ ತರಗತಿಗಳು ಪ್ರಾರಂಭವಾಗುತ್ತದೆ. ನಿಮ್ಮ ಮಗುವಿಗೆ ಕನ್ನಡ ಕಲಿಸಲು ಇದೊಂದು ಸುವರ್ಣಾವಕಾಶ! ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: sandhya_ravindranath at yahoo.com
ನಮಸ್ಕಾರಗಳೊಡನೆ,
ಸಂಧ್ಯಾ ರವೀಂದ್ರನಾಥ್,
ಪ್ರಾಂಶುಪಾಲರು,
“ಕನ್ನಡ ಕಲಿ”
ಜುಲೈ, ೨೦೦೯







